ಶುಕ್ರವಾರ, ಅಕ್ಟೋಬರ್ 26, 2007

ಅಮ್ಮ

ಅಮ್ಮ
ತಾಯಾಗಿ ಮಮತೆ ನೀಡಿದೆ ,
ಸೋದರಿಯಾಗಿ ದುಃಖ ಹಂಚಿಕೊಂಡೆ
ಗೆಳತಿಯಾಗಿ ನೆರವಾದೆ
ಅದರ ಒಂದೆ ಒಂದು ಪ್ರಶ್ನೆ
ಅಮ್ಮ, ನನ್ನನೇಕೆ ಹೀಗೆ ಬೆಳೆಸಿದೆ?

ದುಃಖದ ಸಿಡಿಲು ಬಡಿದಾಗ, ನನ್ನ
ನಿನ್ನ ಸೆರಗಿನಲ್ಲಿ ಬಚ್ಚಿಕೊಂಡೆ ಈಗ,
ಚಿಕ್ಕ ಕಲ್ಲಿಗೆ ಎಡವಿ ಬಿದ್ದಿರುವೆ,
ಅಮ್ಮ, ನನ್ನನೇಕೆ ಹೀಗೆ ಬೆಳೆಸಿದೆ?

ನನ್ನ ಮನದಾಳದ ಮಾತನ್ನು, ನೀ
ಈ ಜಗತ್ತಿಗೆ ತಿಳಿಸಿದೆ, ಇಂದು
ನಿಬಿಡ ಜಗತ್ತಿನಲ್ಲಿ ಬೆಚ್ಚಿ ಬಿದ್ದಿರುವೆ,
ಅಮ್ಮ, ನನ್ನನೇಕೆ ಹೀಗೆ ಬೆಳೆಸಿದೆ?

ನೋವಾದಿತೆಂದು, ನನ್ನ ಪಾಲಿನ
ಕೆಲಸವೂ ನೀ ಮಾಡಿದೆ,
ನಿರ್ಜೀವ ಜಗತ್ತಿನಲ್ಲಿ ಬವಣಿಸಿತಿರುವೆ
ಅಮ್ಮ, ನನ್ನನೇಕೆ ಹೀಗೆ ಬೆಳೆಸಿದೆ?

ದುಃಖ ಬಂದಾಗ ಬಚ್ಚಿಡದೆ ಎದುರಿಸಲು ಬಿಟ್ಟಿದ್ದರೆ,
ಇಂದು ನಾ ಹೀಗಾಗುತ್ತಿರಲ್ಲಿಲ್ಲ,
ನೀರೇನೋ ಎರಡೇ, ಆದರೆ ನಾ,
ಮರವಾಗುವ ಬದಲು ಬೋನ್ಸಾಯ್ ಗಿಡವಾದೆ,
ಅಮ್ಮ, ನನ್ನನೇಕೆ ಹೀಗೆ ಬೆಳೆಸಿದೆ?
- ರಂಜಿತ




ಮರಳಿ ಬಾ

ಮರಳಿ ಬಾ
ಮರಳಿ ಬಾ
ಎಂದು ಮತ್ತೆ ಕರೆಯದಿರಿ
ಬಹಳ ಮುಂದೆ ಬಂದಿರುವೆ
ದುಃಖದಲು ನಗುವುದ ಕಲಿತಿರುವೆ !!


ನಿಮ್ಮೆಲ್ಲರ ಜೊತೆ ಬೆರೆತಾಗ
ಕಂಡು ಕಾಣದಂತೆ ಇದ್ದು ಬಿಟ್ಟಿರಿ
ಈಗ ಎಲ್ಲರಿಲ್ಲದೆ ಎಕಾಂಗಿಯಾಗಿರುವೆ
ಒಂಟಿತನದಲು ಮಂದಹಾಸ ಬೀರುವುದ ,
ಕಲಿತಿರುವೆ, ಮತ್ತೆ ಕರೆಯದಿರಿ !!

ಏರಿದ ಮೆಟ್ಟಿಲಿನಿಂದ ದೂಡಿದಾಗ
ವಿಧಿಯ ದೂಷಿಸಿ ಅಳುವುದ ಮರೆತಿರುವೆ,
ಆ ವಿಧಿಯ ಹಿಡಿತವಿಲ್ಲದೆ, ಪರರ
ನೆರವಿಲ್ಲದೆ ಅಮ್ಬೇಗಾಲಿದುತ್ತಿರುವೆ,
ಮತ್ತೆ ಕರೆಯದಿರಿ !!

ಬಳಿ ಕರೆದು, ನನ್ನ ದೂಡಿದಿರಿ ,
ಮತ್ತೆ ದುಃಖ ಗೆಲ್ಲುವ ಶಕ್ತಿ ನನಗಿಲ್ಲ,
ಬಹಳ ಮುಂದೆ ಬಂದಿರುವೆ,
ಮರಳಿ ಬಾ ಎಂದು ಕರೆಯದಿರಿ !!

ಕನಸಿನ ನೂರೆಂಟು ಅರಮನೆ ಕಟ್ಟಿ
ಕಣ್ತೆರೆದಾಗ ಮುರಿದು ಬೀಳುವುದ
ನಗುತಲೆ ಸ್ವೀಕರಿಸುವುದ ಕಲಿತಿರುವೆ
ಮರಳಿ ಬಾ ಎಂದು ಕರೆಯದಿರಿ !!